ಈವರೆಗೆ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಒಟ್ಟು 2,99,387 ಅರ್ಜಿಗಳು ಸ್ವೀಕೃತವಾಗಿದ್ದು, 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸದಸ್ಯರಾದ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿಗಳು,
ಒಟ್ಟು 2,59,199 ಅರ್ಜಿಗಳು ತಿರಸ್ಕೃತವಾಗಿದ್ದು, 23,583 ಅರ್ಜಿಗಳು ಮಾತ್ರ ಬಾಕಿ ಇರುತ್ತವೆ. ರಾಜ್ಯದಲ್ಲಿ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ನಾನಾ ಕಾರಣಗಳಿಂದ ನಿಧಾನಗತಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.

ಅರ್ಜಿದಾರರು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅರಣ್ಯ ಹಕ್ಕು ಸಮಿತಿಗಳ ಮುಂದೆ ಸಲ್ಲಿಸದಿರುವುದು. ಪರಿಶಿಷ್ಟ ಪಂಗಡಕ್ಕೆ ಸೇರಿರದ ಇತರೆ ಪಾರಂಪರಿಕ ಅರಣ್ಯವಾಸಿಗಳು 75 ವರ್ಷಗಳಿಂದ ಅರಣ್ಯ ಭೂಮಿ ಅವಲಂಬಿಸಿರುವ ಬಗ್ಗೆ ದಾಖಲೆ ಒದಗಿಸದೇ ಇರುವುದು. ರಾಷ್ಟ್ರೀಯ ಅಭಯಾರಣ್ಯ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗುವುದಕ್ಕೂ ಮೊದಲೇ ಅರಣ್ಯವಾಸಿಗಳು ಸ್ಥಳಾಂತರಗೊಂಡಿರುವುದರಿಂದಅರ್ಜಿಗಳು ತಿರಸ್ಕೃತವಾಗಿವೆ.

ಉಪವಿಭಾಗ ಸಮಿತಿ (SDLC) ಮತ್ತು ಜಿಲ್ಲಾ ಮಟ್ಟದ ಸಮಿತಿ (DLC) ಗಳಲ್ಲಿ ನಾಮನಿರ್ದೇಶಿತ ತಾಲ್ಲೂಕು/ ಜಿಲ್ಲಾ ಪಂಚಾಯಿತಿ ಸದಸ್ಯರಿಲ್ಲದಿರುವ ಕಾರಣಗಳಿಂದ ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.