ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಮುಂದುವರೆದಿದ್ದು ಕಳೆದ ಎರಡು ದಿನಗಳ ಅವಧಿಯಲ್ಲಿ ವಿವಿಧೆಡೆ ಅವಾಂತರ ಸೃಷ್ಟಿಸಿದೆ.

ದಂತದಿಂದ ತಿವಿದು ಪಿ.ಕೆ.ರಾಮನ್ ಎಂಬವರ ಮನೆಯ ಗೋಡೆ ಹಾಗೂ ಶೀಟನ್ನು ಹಾನಿಗೊಳಿಸಿರುವ ಕಾಡಾನೆ ಕಳೆದೆರಡು ದಿನಗಳ ಹಿಂದೆ ಪ್ರಸಾದ್ ಎಂಬವರ ಕಾರಿಗೆ ಒದ್ದು ಹಾನಿಪಡಿಸಿದೆ. ಅಲ್ಲದೇ ಮೋಹನ್ ಎಂಬುವವರ ಮನೆ ಆವರಣದಲ್ಲಿ ತೆಂಗಿನ ಮರ ಉರುಳಿಸಿ ಎಳನೀರು ಕುಡಿದು, ತೆಂಗಿನ ಕಾಯಿ ತಿಂದು ತೆರಳಿದೆ.

ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ಉಪಟಳದಿಂದಾಗಿ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಕಾಡುಪ್ರಾಣಿಗಳ ಹಾವಳಿಯ ನಿಯಂತ್ರಣಕ್ಕೆ ಈ ಹಿಂದೆ ಒಂದು ತಿಂಗಳು ಗಡುವು ನೀಡಿದ್ದು ಎರಡು ವಾರ ಕಳೆದಿದೆ. ಇನ್ನು ಎರಡು ವಾರದ ಒಳಗಾಗಿ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಡುಪ್ರಾಣಿಗಳ ತಡೆ ಹೋರಾಟ ಸಮಿತಿ ವತಿಯಿಂದ ಅರಣ್ಯ ಇಲಾಖೆಯ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಮುನ್ನೆಚ್ಚರಿಕೆಯಿತ್ತಿದ್ದಾರೆ.