ಕರ್ನಾಟಕ ಸರ್ಕಾರ ಕೃಷಿ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ 2025 ರ ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮವನ್ನು ಡಿಸೆಂಬರ್, 20 ರಂದು ಬೆಳಗ್ಗೆ 7 ಗಂಟೆಗೆ ಕೊಡಗು ಜಿ.ಪಂ.ಸಿಇಒ ಅವರು ಉದ್ಘಾಟಿಸಲಿದ್ದಾರೆ.
ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನವರೆಗೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದೆ.
“ಸಿರಿಧಾನ್ಯ” ಮತ್ತು “ಮರೆತು ಹೋದ ಖಾದ್ಯಗಳ’ ಪಾಕ ಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ಡಿಸೆಂಬರ್, 20 ರಂದು ಬೆಳಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೆಎಸ್ಎಫ್ಸಿ ಕಟ್ಟಡ, ಇಂಡಸ್ಟ್ರೀಯಲ್ ಪ್ರದೇಶ ಇಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಡಿಸೆಂಬರ್, 18 ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಸಂಬAಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕೆಲವು ಸೂಚನೆಗಳನ್ನು ಪಾಲಿಸುವುದು. ಸಿರಿಧಾನ್ಯ ಖಾದ್ಯಗಳು- ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರ ಖಾದ್ಯಗಳನ್ನು ತಯಾರಿಸಲು ಅವಕಾಶವಿದೆ.
“ಮರೆತು ಹೋದ ಖಾದ್ಯಗಳು: ದೇಶಿ ತಳಿಗಳ ಪೌಷ್ಠಿಕಾಂಶದ ಮೌಲ್ಯ, ಬಳಕೆಯಾಗದ ಬೆಳೆಗಳು, ಮರೆತುಹೋದ ಆಹಾರಗಳು. ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಶಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ/ ನಿರ್ವಹಿಸಲ್ಪಡುವ ವಿಶಿಷ್ಟ ಗುಣಲಕ್ಷಣಗಳು, ಪೋಷಕಾಂಶಗಳಲ್ಲಿ ಸಮೃದ್ಧ ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ಬೆಳೆಯುವ ದೇಶಿ ತಳಿಗಳಿಂದ ತಯಾರಿಸುವ ಖಾದ್ಯಗಳು.
ಮರೆತು ಹೋದ ಖಾದ್ಯಗಳಡಿ ಸಿರಿಧಾನ್ಯಗಳನ್ನು ಹೊರತುಪಡಿಸಿ ಇತರೆ ದೇಶಿ ತಳಿಗಳಡಿ ಬರುವ ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳ, ತರಕಾರಿ ಮತ್ತು ಹಣ್ಣುಗಳ ಮತ್ತಿತರ ಖಾದ್ಯಗಳನ್ನು ತಯಾರಿಸುವುದು. ಸ್ಪರ್ಧಿಗಳು ಖಾದ್ಯಗಳನ್ನು ಮುಂಚಿತವಾಗಿಯೇ ತಯಾರಿಸಿಕೊಂಡು ಪ್ರದರ್ಶನಕ್ಕೆ ತರುವುದು.
ತಯಾರಿಸಿದ ತಿನಿಸುಗಳ ರುಚಿ, ಪ್ರದರ್ಶನ, ಬಳಸಿದ ಸಾಮಾಗ್ರಿಗಳು, ತೋರಿಕೆ, ಸುವಾಸನೆ, ಪೌಷ್ಟಿಕತೆಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು. ತೀರ್ಪುದಾರರ ನಿರ್ಧಾರವೇ ಅಂತಿಮವಾಗಿದೆ.
ಜಿಲ್ಲಾಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ.3 ಸಾವಿರ ಹಾಗೂ ತೃತೀಯ ಬಹುಮಾನ ರೂ, 2 ಸಾವಿರಗಳ ಬಹುಮಾನವಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಲು ಅವಕಾಶವಿದೆ. (ವಿದ್ಯಾರ್ಥಿಗಳು/ ಕೃಷಿ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ).
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು 2025 ರ ಜನವರಿ, 23 ರಿಂದ 25 ರವರೆಗೆ ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ತಾವೇ ತೆಗೆದುಕೊಂಡು ಹೋಗಿ ನಿಗಧಿತ ಸ್ಥಳ, ಸಮಯದಲ್ಲಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರು, ವಿರಾಜಪೇಟೆ ಇವರ ಮೊಬೈಲ್ ಸಂಖ್ಯೆ: 8277929456 ನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.